ಅನ್ನ ಕೊಟ್ಟ ಭಾಷೆ
ಅನುಭವದ ಪಾಠ ಯೋಗ ತರಬೇತಿ ಮುಗಿಸಿ ಬರುವಾಗ ಗೆಳತಿಗೆ ಚಿತ್ರಕಲಾ ಪರಿಷತ್‌ಗೆ ಹೋಗೋಣವೆಂದರೆ, ಮೊದಲೇ ನಕಾರ. ಹೂಕುಂಡ ತೆಗೆದುಕೊಳ್ಳೋಣವೆಂದಾಗ ಒಪ್ಪಿಕೊಂಡಳು. ಹತ್ತಿರದ ನರ್ಸರಿಗೆ ಹೋದಾಗ, ಸುಮಾರು ಇಪ್ಪತ್ತೈದು ವರ್ಷದ ಯುವಕನು ಹೊರಗೆ ಬಂದ. ಕನ್ನಡ ಬರುತ್ತದೆಯೇ ಎಂದು ಕೇಳಿದಾಗ, ಅವನು ಕನ್ನಡವನ್ನು ಮುತ್ತಿನಂತೆ ಮಾತನಾಡಿದ. ಅವನ ಕಥೆ ಕೇಳಿದಾಗ ಮನಸ್ಸಿಗೆ ಸ್ಪರ್ಶವಾಯಿತು—ಲಕ್ನೋ ಮೂಲದವನು, ಐದು ವರ್ಷಗಳಿಂದ ಇಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡು, ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದ. "ಅನ್ನ ಕೊಟ್ಟ ಭಾಷೆ ಕಲಿಯದೇ ಇರುವುದೇ ತಪ್ಪು, ಮನಸ್ಸಿದ್ದರೆ ಏನು ಬೇಕಾದರೂ ಕಲಿಯಬಹುದು" ಎಂದ ಅವನ ಮಾತು ಹೃದಯಕ್ಕೆ ಹತ್ತಿತು. ನನ್ನ ಅಪಾರ್ಟ್ಮೆಂಟಿನಲ್ಲಿ ವರ್ಷಗಳಿಂದ ವಾಸಿಸುವ ಉತ್ತರ ಭಾರತದವರು ಕನ್ನಡ ಕಲಿಯಲು ಪ್ರಯತ್ನಿಸದಿರುವುದು ನೆನಪಾಯಿತು. ಆದರೆ ಈ ಹುಡುಗನು ನಿಷ್ಠೆಯಿಂದ ಕಲಿತು, ಬದುಕನ್ನು ಕಟ್ಟಿಕೊಂಡಿರುವುದು ನನಗೆ ಪಾಠವಾಯಿತು. ಅವನಿಂದ ಎರಡು ಪಾಠಗಳು ಕಲಿತೆ: 1. ಮನಸ್ಸಿದ್ದರೆ ಕಲಿಯುವುದು ಕಷ್ಟವಲ್ಲ. 2. ಯಾವುದೇ ಕೆಲಸ ನಿಷ್ಠೆಯಿಂದ ಮಾಡಿದರೆ ಯಶಸ್ಸು ಖಚಿತ.