ನೆನಪುಗಳು ಭಾರವಾದಾಗ-ಅದ್ಯಾಯ ಒಂದು


ಅಮ್ಮನ ಮನೆಯ ಸುತ್ತ ಪುಟ್ಟ ತೋಟ, ಹೂವು, ಗಿಡಮರಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳು, ಸುಂದರ ಚಿಟ್ಟೆಗಳು, ಅಲ್ಲಿ ಇರುವ ಕಲ್ಲಿನ ಆಸನ ದಲ್ಲಿ ಕೂತರೆ ಪ್ರಪಂಚವೇ ಮರೆತು ಹೋಗುತ್ತದೆ.

ಅಮ್ಮನಿಗೆ ಏನಾದರೂ ಹೇಳಬೇಕೆಂದರೆ ಅಲ್ಲಿಗೆ ಹೋಗಿ ಕುಳಿತು ಮಾತನಾಡುವ ಕ್ರಮ. ಇಂದು ಹಾಗೇ ಕುಳಿತಿರುವಾಗ ಅಮ್ಮ ತನ್ನ ಕಷ್ಟದ ದಿನಗಳನ್ನು ನೆನೆಯುತ್ತಿದ್ದರು.

ಹೀಗೆ ತಮ್ಮ ಹಳೆಯ ದಿನಗಳನ್ನು ನೆನೆಯುತ್ತ ನೆಡೆದ ಒಂದು ಘಟನೆ ಮೆಲಕುತ್ತ ಇರಲು, ನನಗೆ ಹೇಳಿದರು ನೀನು ಬರಿ, ಬರೆದಾಗ "ನೆನಪುಗಳು ಭಾರವಾದಾಗ" ಎಂದು ಶೀರ್ಷಿಕೆ ಇಡು ಎಂದರು. ಹೇಳಿ ಬಹಳ ದಿನಗಳೇ ಕಳೆದವು, ಅಮ್ಮನ ಕಹಿ ನೆನಪುಗಳ ಅದ್ಯಾಯ ಪ್ರಾರಂಭ.

ಚಿಕ್ಕವಳಿದ್ದಾಗಿನಿಂದ ಅಪ್ಪನ ಆರ್ಭಟ ನೋಡಿ ಭಯವಾಗುತ್ತಿತ್ತು, ಎಂದೂ ತಂದೆಯ ಹತ್ತಿರ ಅಕ್ಕರೆಯಿಂದ ಹೋದ ನೆನಪೇ ಇಲ್ಲ, ಕೋಪ ತಾಂಡವವಾಡುತ್ತಿತ್ತು, ಎಲ್ಲದರಲ್ಲೂ ಅವರದೇ ನಡೆಯಬೇಕಿತ್ತು ಮನೆಯಲ್ಲಿ, ಅದಕ್ಕೆ ಒಂದು ಚಿಕ್ಕ ಉದಾಹರಣೆ,    ಚಿಕ್ಕವರಿದ್ದಾಗ  ದಾವಣಗೆರೆಯಲ್ಲಿ ಕಾನ್ವೆಂಟ್ ಗೆ ಸೇರಿಸಿದ ಅಪ್ಪ, ಎಂದೂ "ಅಪ್ಪ" "ಅಮ್ಮ" ಎಂದು ಕರಿಯಬಾರದು ಅದರ ಬದಲು "ಡ್ಯಾಡಿ"ಮತ್ತು "ಮಮ್ಮಿ" ಅನ್ನಬೇಕು ಎಂದು, ಅಮ್ಮ ಅಂದಾಗಲೆಲ್ಲ ಅಪ್ಪ ಹೊಡೆದು, ಬೈದು ಡ್ಯಾಡಿ, ಮಮ್ಮಿ ಎಂದು ಬದಲಿಸಿದರಂತೆ. ಇನ್ನು ನೆನಪಿದೆ ನನ್ನ ಸೋದರ ಮಾವ ಕೀಟಲೆ ಮಾಡುತ್ತಿದ್ದ, ಏನೇ ನಿನ್ನ ಧಾಡಿ (ಗಡ್ಡ) ಹೇಗೆ ಇದ್ದಾರೆ ಎಂದು. ಆಗ ಬೇಜಾರಾಗುತ್ತಿತ್ತು ಆದರೆ ಉತ್ತರಿಸಲು ಗೊತ್ತಾಗದೆ ಬೆಪ್ಪಾಗಿದ್ದುಂಟು. ಹೀಗೆ ನಡೆಯಿತು ನಮ್ಮ ಅಪ್ಪ ಅಮ್ಮನಿಂದ, ಡ್ಯಾಡಿ ಮಮ್ಮಿಯ ಕಥೆ.
ನಲವತ್ತರ ಪ್ರಾಯದಲ್ಲಿ ಡ್ಯಾಡಿ ಮಮ್ಮಿ ಅಂತ ಕರೆಯುವುದು ಬಲು ಮುಜುಗರ, ನನ್ನ ಮಗಳು ಹೀಗೆ ಯಾಕೆ ಕರೆಯುತ್ತೀರಾ ವೆಂದು ಕೇಳಿದಾಗ ನನ್ನ ಉತ್ತರ ?,

ಒಮ್ಮೊಮ್ಮೆ ಬ್ರಿಟಿಷ್ ಎಷ್ಟು ಮರುಳು ಮಾಡಿ ಹೋದರೋ ಎಂದೂ ಯೋಚನೆ ಬರುತ್ತದೆ, ನಮ್ಮ ಶಿಕ್ಷಣದ ರೂಪೇ ಬದಲಿಸಿದರು.

ಇಲ್ಲಿಗೆ ಬರೋಣ, ಅಮ್ಮನ ಸೀರೆಇಂದ ಚಪ್ಪಲಿಯವರೆಗೂ ಅಪ್ಪ ತಂದ್ದಿದ್ದು ಮತ್ತು ಅವರ ಇಷ್ಟ ಬಂದಂತೆ ಅಮ್ಮ ಇರಬೇಕು, ಆ ಚಿಕ್ಕ ಪ್ರಾಯದಲ್ಲಿ ಯಾವಾಗಲು ಯೋಚಿಸುತ್ತಿದ್ದೆ, ನಾನಂತೂ ಮದುವೆ ಆಗುವುದಿಲ್ಲ. 

 ಹೀಗೆ ಅಪ್ಪನನ್ನು ಹಿರಣ್ಯಕಶುಪು ಎಂದೂ ಹೇಳುತ್ತಿದ್ದೆ, ಆದರೆ ಹಿರಣ್ಯಕಶುಪು ತನ್ನ ಹೆಂಡತಿಯನ್ನು ಅಕ್ಕರೆಇಂದ ನೋಡಿಕೊಳ್ಳುತ್ತಿದ್ದ, ಇಲ್ಲಿ ಅದೂ ಇಲ್ಲವೇ. ನನ್ನ ಬುದ್ದಿ ಬಂದಾಗಿನಿಂದ ಅಮ್ಮನನ್ನು ಹೆದರಿ ಹೆದರಿ ಜೀವಿಸಿದ್ದೆ ನೋಡಿರುವೆ, ಅದೇ ಅಮ್ಮ ಮಾಡಿದ ತಪ್ಪು. ಅಂದೇ ಅವರು ಇಲ್ಲ ಎಂದೂ ಹೇಳಲು ಕಲಿತಿದ್ದರೆ ಇಂದು ಅವರಿರುವ ಪರಿಸ್ಥಿತಿ ಬರುತ್ತಿರಲಿಲ್ಲ. ಎಂದು ಅವರು ಹೆಣ್ಣಿಗೆ ಅವಳದೇ ಆದ ಮನಸ್ಸಿದೆ ಎಂದೂ ಯೋಚಿಸಿದ್ದೆ ಇಲ್ಲ. ಅಮ್ಮ ಬುದ್ದಿವಂತೆ ಆದರೆ ಅವರು ಬೆಳೆಯಲು ಬಿಡಲಿಲ್ಲ. 

ಅಪ್ಪ, ಅಮ್ಮನಿಗೆ ಅಂತ ಧಾರಾಳವಾಗಿ ಕೈಖರ್ಚಿಗೆ ದುಡ್ಡು ಕೊಟ್ಟಿದ್ದಿಲ್ಲ, ಆಗ ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ಅಮ್ಮ ಮನೆಯ ಖರ್ಚಿನಲ್ಲಿ ಅಲ್ಪ ಸ್ವಲ್ಪ ಉಳಿಸಿದ ಚಿಲ್ಲರೆಯಲ್ಲಿ ನಮ್ಮ ಚಿಕ್ಕ ಪುಟ್ಟ ಬಯಕೆಗಳನ್ನು ತೀರಿಸುತ್ತಿದ್ದರು. ಹೀಗೆ ಮನೆಯ ರದ್ದಿ ಯಲ್ಲಿ ಬಂದ ದುಡ್ಡು ಬಚ್ಚಿಡಲು ಅಟ್ಟದ ಮೇಲೆ ಹತ್ತಿ ಇಡುವಾಗ, ಅಪ್ಪನ ಸ್ಕೂಟರ್ ನ ಸದ್ದಿಗೆ ಗಾಬರಿಗೊಂಡು ಇಳಿಯಲು ದಡಬಡದಿಂದ ಜಾರಿ ಬಿದ್ದು ಕೈ ಮುರಿದುಕೊಂಡಿದ್ದರು, ನಮಗೋ ಅಪ್ಪನ ಕಂಡರೆ ಯಾವುದೊ ಬೂತ ಕಂಡಂತೆ, ಮಾತನಾಡಲು ಭಯ, ಮಾತನಾಡಿದರೆ ಏಟು ಎಲ್ಲಿ ಬೀಳುವುದೋ ವೆಂಬಾ ಭಯ, ಅಮ್ಮನ ಹತ್ತಿರ ನಮಗೆ ಸಲಿಗೆ.  ಏಷೋ ದಿನಗಳು ಅಮ್ಮ ಒಂದೇ ಕೈಯಲ್ಲಿ ಅಡುಗೆ ಮಾಡಿದ್ದುಂಟು. ಹೀಗೆ ಮದುವೆಯಾಗಿ ಬಂದಾಗಿನಿಂದ ಪಟ್ಟ ಪಾಡು ಒಂದೇ ಎರಡೇ. 



                                                                                                                          ಮುಂದುವರೆಯುವುದು............

Comments

Post a Comment